ಮರಣ-
ಜೀವಿಯ ಅಂತ್ಯ (ಡೆತ್). ಎಂದರೆ ಜಗತ್ತಿನಿಂದ ಇಲ್ಲವಾಗುವುದು. ಈ ಪ್ರಪಂಚದಲ್ಲಿ ಹುಟ್ಟಿದ ಎಲ್ಲ ಜೀವಿಯೂ ಮರಣಹೊಂದಲೇ ಬೇಕು. ಇದರಿಂದ ಯಾರೂ ಹೊರತಾಗಿಲ್ಲ. ಜನನದಂತೆ ಮರಣವೂ ನಿಸರ್ಗವಾದದು. ಜಾತಸ್ಯ ಮರಣಂ ಧ್ರುವಂ. ಜೀವನ ಶ್ರೇಯಸ್ಕರ, ಮರಣ ಅಮಂಗಳ ಎನ್ನುವ ಕಲ್ಪನೆ ಜಗತ್ತಿನಾದ್ಯಂತ ಪ್ರಚಲಿತವಾಗಿದೆಯಷ್ಟೆ. ಮರಣ ಅತ್ಯಂತಿಕವಾದ ಅಗಲಿಕೆ ಎಂಬ ಕಾರಣದಿಂದ ವಿಷಾದ; ಮರಣಾನಂತರದ ಸ್ಥಿತಿಗತಿಗಳು ಅನಿರ್ದಿಷ್ಟವಾದುದರಿಂದ ಭಯ; ಪ್ರಾಣದ ಉತ್ಕ್ರಮಣದಲ್ಲಿ ಒದಗುವ ಯಾತನೆ ನೋಡಿ ಅಂಜಿಕೆ, ಜುಗುಪ್ಸೆ; ಸತ್ತವ ಬದುಕ್ಕಿದ್ದವರನ್ನು ಕಾಡಿಯಾನು ಎಂದು ಕೈಗೊಂಡ ಶ್ರಾದ್ಧಾದಿ ಕರ್ಮಗಳಲ್ಲಿ ಶ್ರದ್ಧೆ-ಹೀಗೆ ಹಲವಾರು ಚಿಂತನೆಗಳು, ಭಾವನೆಗಳು, ನಿರೀಕ್ಷೆ-ನಿರಾಶೆಗಳು ಭಯ ಉದ್ವೇಗಗಳು. ಸಂಭ್ರಮ-ಶ್ರದ್ಧೆಗಳು ಮರಣದ ವಿಚಾರವಾಗಿ ಮನುಷ್ಯನನ್ನು ಮುತ್ತಿರುವುದು ಮಾನವವಿಕಾಸದ ಆದಿಮ ಘಟ್ಟಗಳಿಂದ ಕಾಣಬರುತ್ತಿದೆ. ಪ್ರಪಂಚದ ಹಲವಾರು ದೇಶಗಳಲ್ಲಿ ವಿಚಿತ್ರ ಭಾವನೆಗಳೂ ವಿಚಿತ್ರ ಕರ್ಮಗಳೂ ಪ್ರಚಲಿತವಾಗಿವೆ. ಮರಣ ಮನುಷ್ಯನನ್ನು ಮುಟ್ಟದಿರುವಂತೆ ಮಾಡುವ ತವಕ ತುಂಬಾ ಪ್ರಾಚೀನವಾದುದು, ವಿಶ್ವವ್ಯಾಪಿಯಾದುದು. ಸತ್ತವನಿಗೆ ಸದ್ಗತಿ ಕಾಣಿಸುವ ಪ್ರಯತ್ನವೂ ಹೀಗೆಯೇ ಎಲ್ಲ ಕಾಲಗಳಲ್ಲಿಯೂ ಎಲ್ಲ ದೇಶಗಳಲ್ಲಿಯೂ ಇದ್ದುದೇ. ಸತ್ತವ ಪ್ರೇತವಾಗಿ ಅಮಂಗಳಕರನಾಗುವನೆಂಬ ಭಾವನೆ ಹಲವಾರು ದೇಶಗಳಲ್ಲಿದೆ; ಈ ಕಾರಣದಿಂದ ಅವನ ಪ್ರಭಾವವನ್ನು ನಿತ್ಯ ಜೀವನದಿಂದ ತೊಡೆದು ಹಾಕಲು ಅನುಸರಿಸುವ ವಿಧಿಗಳೂ ಈ ದೇಶಗಳಲ್ಲಿ ಪ್ರಚಲಿತವಾಗಿವೆ. 

	ಮರಣ ಉಂಟಾಗುವುದು ಹೇಗೆ ಎಂಬ ಸಮಸ್ಯೆ ಆಧುನಿಕರನ್ನು ಕಾಡಿದಂತೆಯೇ ಆದಿವಾಸಿಗಳನ್ನೂ ಕಾಡಿದೆ. ಮನುಷ್ಯ ಮಾಡಿದ ಅಪರಾಧಕ್ಕಾಗಿ ದೇವರು ಕೊಟ್ಟ ಶಾಪ; ಶಿಕ್ಷೆ ಇದು ಎಂಬ ವಿವರಣೆ ಪಾಶ್ಚಾತ್ಯದೇಶದ ಹಲವಾರು ಜನಾಂಗಗಳಲ್ಲಿ ಕಂಡುಬರುತ್ತದೆ. ಕ್ರೈಸ್ತಜನರ ನಂಬಿಕೆಯೂ ಇದೇ. ತೋಡ ಜನರಲ್ಲಿ ಒಂದು ಕಥೆಯಿದೆ. ಮೊದಲಿಗೆ ಯಾರೂ ಸಾಯುತ್ತಲೇ ಇರಲಿಲ್ಲವಂತೆ. ಒಮ್ಮೆ ಒಬ್ಬನು ಸತ್ತನಂತರ ಅವನ ಬಳಗದವರು ಅಳಲು ಮೊದಲು ಮಾಡಿದರಂತೆ. ಅವರ ಅಳುವನ್ನು ಕೇಳಿ ಮರುಗಿ ತೈಕಿರ್ಸಿ ಎಂಬ ದೇವತೆ ಅವನನ್ನು ಮತ್ತೆ ಬದುಕಿಸಲು ಸಂಕಲ್ಪ ಮಾಡಿದಳಂತೆ. ಆದರೆ ಆಕೆ ಇವನು ಸತ್ತದ್ದಕ್ಕಾಗಿ ಹಲವರು ಸಂತೋಷದಲ್ಲಿರುವುದನ್ನು ನೋಡಿ ತನ್ನ ಮನಸ್ಸು ಬದಲಾಯಿಸಿ ಸತ್ತವನನ್ನು ಬದುಕಿಸದೆ ಅವನ ಉತ್ತರಕ್ರಿಯೆಗಳನ್ನು ಮಾಡುವಂತೆ ವಿಧಿಸಿದಳಂತೆ. ಮರಣ ಸ್ವಾಭಾವಿಕವಾದುದು, ಅನಿವಾರ್ಯವಾದುದು ಎಂದು ಪ್ರಾಚೀನ ಜನ ನಂಬಿರಲಿಲ್ಲ. ಕೆಲವು ಜನಾಂಗಗಳಲ್ಲಿ ಮುಪ್ಪು, ರೋಗ ಇವುಗಳ ನೋವನ್ನು ಸಹಿಸಲಾರದೆ ಆತ್ಮ ದೇಹವನ್ನು ಬಿಟ್ಟು ಓಡುವುದೆಂಬ ನಂಬಿಕೆಯಿದ್ದಿತು. ಹೀಗೆ ಓಡಿಹೋದ ಆತ್ಮ ಹಿಂದೆ ಬರುವಂತೆ ಮಾಡಲು ಐಂದ್ರಜಾಲಿಕ ತಜ್ಞರ ನೆರವನ್ನು ಬೇಡುತ್ತಿದ್ದರು. ಮರಣವನ್ನು ಉಂಟುಮಾಡುವಂಥ ರೋಗವೂ ಭೂತ ಪ್ರೇತಪಿಶಾಚಾದಿ ಅತಿಪ್ರಾಕೃತ ಸತ್ತ್ವಗಳಿಂದಲೇ ಆದುದೆಂಬ ಪೂರಕ ಕಲ್ಪನೆಯೂ ಅಲ್ಲಲ್ಲಿ ಇದ್ದಿತು. ಬಲುಮಟ್ಟಿಗೆ ಯಕ್ಷಿಣ, ತಂತ್ರ, ಮಂತ್ರಗಳಿಂದ ಮರಣವನ್ನು ಉಂಟುಮಾಡಬಹುದೆಂಬ ವಿಶ್ವಾಸ ಎಲ್ಲ ಆದಿವಾಸಿ ಜನರಲ್ಲಿಯೂ ಇದೆ. ಈ ಕಾರಣದಿಂದ ಆ ಜನರಲ್ಲಿ ಈ ವಿದ್ಯೆಯಲ್ಲಿ ನಿಷ್ಣಾತರಾದವರಿಗೆ ಪುರಸ್ಕಾರ ಹೆಚ್ಚು. 

	ಮರಣ ಪ್ರಸಂಗಕ್ಕೆ ಅಂಜಿದ ಜನ ಮರಣ ನಿಶ್ಚಯವೆಂದು ಗೊತ್ತಾದೊಡನೆ ಆ ಮನುಷ್ಯನನ್ನು ಅಲ್ಲಿಯೇ ಬಿಟ್ಟು ದೂರ ಹೋಗುತ್ತಾರೆ. ಸಾಯುವ ಸಮಯದಲ್ಲಿ ಅವನ ನೋಟದಿಂದಲೋ ಮಾತಿನಿಂದಲೋ ಬಯಕೆಯಿಂದಲೋ ನೆರೆದಿರುವ ಜನರಿಗೆ ಆತಂಕವುಂಟಾದೀತೆಂಬ ಭಯವೇ ಇದಕ್ಕೆ ಕಾರಣ. ಇಲ್ಲವೇ ಇನ್ನೂ ಪ್ರಾಣ ಇದ್ದಾಗಲೇ ಮರಣೋನ್ಮುಖ ರೋಗಿಯನ್ನು ಸಮಾಧಿಮಾಡಿಬಿಡುತ್ತಾರೆ. ಶವವನ್ನು ಮನೆಯಿಂದ ದೂರ ಊರಿನಿಂದ ಹೊರಗೆ ಒಯ್ದು ಅದಕ್ಕೆಂದೇ ಗೊತ್ತಾದ ಸ್ಥಳದಲ್ಲಿ (ಶ್ಮಶಾನದಲ್ಲಿ) ಹೂಳುತ್ತಾರೆ; ಇಲ್ಲವೇ ಸುಡುತ್ತಾರೆ. ಕೆಲವು ಜನಾಂಗದವರು ಹೆಣವನ್ನು ಹಾಗೆಯೇ ಎಸೆದು ಬರುತ್ತಾರೆ. ಸುಡುಗಾಡು ಅಮಂಗಳವೆಂದೂ ಪ್ರೇತಗಳ ವಿಹಾರಭೂಮಿಯೆಂದೂ ಐಂದ್ರಜಾಲಿಕ ವಿದ್ಯೆಗೆ ಸ್ಥಳವೆಂದೂ ಎಲ್ಲ ಜನರು ನಂಬುತ್ತಾರೆ. ಹಿಂದೂಗಳಲ್ಲಿ ಮನೆಯ ಒಳಗೆ ಸಾಯುವುದು ಮನೆಗೆ ಅಶುಭವೆಂದೂ ಸಾಯುವವನನ್ನು ಬೀದಿಜಗಲಿಯ ಮೇಲೆ ಮಲಗಿಸುವ ಪದ್ಧತಿ ಇದೆ; ಇಲ್ಲವೇ ನದೀತೀರಕ್ಕೆ ಒಯ್ಯುತ್ತಾರೆ. ಮನೆಯ ಕೋಣೆಯೊಳಗೆ ಸತ್ತರೆ ನಕ್ಷತ್ರ ನೋಡಿ ಆ ಕೋಣೆಯನ್ನು ಕೆಲವು ತಿಂಗಳುಗಳು ಮುಚ್ಚುತ್ತಾರೆ. ಕೆಲವು ಜನಾಂಗಗಳಲ್ಲಿ ಸಾಯುವವರಿಗೆಂದೇ ಪ್ರತ್ಯೇಕವಾದ ಮನೆಯೊಂದನ್ನು ಊರೊಳಗೆ ಕಟ್ಟಿಸಿರುತ್ತಾರೆ. ಅಲ್ಲಿ ಯಾರೂ ವಾಸಮಾಡುವುದಿಲ್ಲ. ಉಲ್ಬಣವಾದ ಬೇನೆ ಬಂದವರು, ಸಾವು ಸನ್ನಿಹಿತರಾದವರು ಅಲ್ಲಿ ನಿಕ್ಷಿಪ್ತರಾಗುತ್ತಾರೆ ಅಷ್ಟೆ.. 
ಸಾಯುವವರನ್ನು ಹಾಸಿಗೆಯಿಂದ ಎತ್ತಿ ಹುಲ್ಲು ಹರಡಿದ ನೆಲದ ಮೇಲೆ ಮಲಗಿಸುವ ಪದ್ಧತಿ ಪ್ರಾಚ್ಯ ಪಾಶ್ಚಾತ್ಯದೇಶಗಳಲ್ಲೆಲ್ಲ ಉಂಟು. ಸಾವಿನ ಸೋಂಕು ಮನೆಯಲ್ಲಿ ಉಳಿಯಬಾರದೆಂಬ ತವಕ ಇಲ್ಲಿ ಕಾಣುತ್ತದೆ. ಅಲ್ಲದೆ ನೆಲದ ನೇರವಾದ ಸಂಪರ್ಕ ಇದ್ದರೆ ಆತ್ಮ ಪ್ರೇತಲೋಕಕ್ಕೆ ಇಳಿಯುವುದು ಸುಲಭ ಎಂಬ ಕಲ್ಪನೆಯೂ ಇದೆ. 
	
ಮರಣವೆಂದರೆ ದೇಹದಿಂದ ಆತ್ಮ ಸ್ವತಂತ್ರವಾಗುವುದು, ಆತ್ಮವಿಲ್ಲದ ದೇಹ ಚೈತನ್ಯವಿಲ್ಲದೆ ಜಡವಾಗಿ ಉಳಿಯುವುದು ಎಂಬ ಭಾವನೆ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಇದೆ. ದೇಹ-ಆತ್ಮಗಳ ಪೃಥಕ್ಕರಣ ಎಲ್ಲ ರೋಗಗಳಿಗೂ ಸ್ವಪ್ನಕ್ಕೂ ಕಾರಣವೆಂಬ ಕಲ್ಪನೆ ಇದೆ; ಇದಕ್ಕಾಗಿಯೇ ರೋಗಿಗೆ ಮಾಂತ್ರಿಕನ ನೆರವು ಅಗತ್ಯ. ಆತ್ಮವನ್ನು ದೇಹದೊಂದಿಗೆ ಮತ್ತೆ ಸೇರಿಸುವುದು ಅವನ ಕೆಲಸ. ಸಾವು ಆದೊಡನೆ ಪಾಶ್ಚಾತ್ಯದೇಶಗಳಲ್ಲಿ ಕೋಣೆಯ ಕಿಟಕಿ ಬಾಗಿಲುಗಳನ್ನೆಲ್ಲ ತೆರೆಯುತ್ತಾರೆ. ಚೀನದಲ್ಲಿ ಚಾವಣಿಗೊಂದು ತೂತು ಮಾಡಿರುತ್ತಾರೆ. ಆತ್ಮ ತಪ್ಪಿಸಿಕೂಳ್ಳಲು ಸೌಲಭ್ಯ ಇದು. ಯೂರೊಪಿನಲ್ಲಿ ತತ್‍ಕ್ಷಣ ಗಡಿಯಾರಗಳನ್ನು ನಿಲ್ಲಿಸುತ್ತಾರೆ. ಕನ್ನಡಿಗಳನ್ನು ಮುಚ್ಚುತ್ತಾರೆ, ಎಲ್ಲ ಪಾತ್ರೆಗಳನ್ನು ಖಾಲಿಮಾಡುತ್ತಾರೆ. ಸತ್ತಾಗ ಸಮೀಪ ಬಂಧುಗಳು ದುಖಃ ಪಡುವುದು ಸಹಜವಾದರೂ ಮರಣದ ಸಮಯದಲ್ಲಿ ಅಳು ಅತ್ಯಾವಶ್ಯಕವಾದ ಕ್ರಿಯೆ ಎಂದು ಪರಿಗಣಿತವಾಗಿದೆ. ಜೋರಾಗಿ ಅಳುವುದು ಸಂಬಂಧಿಗಳಿಂದ ಆಗದ್ದಿದರೆ, ಅದಕ್ಕಾಗಿ ಅಳುವ ಜನರನ್ನು ದುಡ್ಡು ಕೊಟ್ಟು ಕರೆಸುತ್ತಾರೆ. ಈ ಪದ್ಧತಿ ಹಲವಾರು ಜನಾಂಗಗಳಲ್ಲಿ ಉಂಟು. ಹೊಸಪ್ರೇತದ ಬಳಿ ದುಷ್ಟ ಪಿಶಾಚಿಗಳು ಬರದಿರಲೆಂದು ಈ ಅಳು ಗದ್ದಲ; ಪ್ರೇತವಾದದ್ದು ಅದೇ ಸ್ಥಳದಲ್ಲಿ ಕೆಲಕಾಲ ಸಂಚರಿಸುತ್ತಿರುವುದೆಂದೂ ಅಳುವಿನ ಶಬ್ದದಿಂದ ತನ್ನ ಜನ ತನ್ನನ್ನು ಪ್ರೀತಿಸುತ್ತಾರೆಂದೂ ಅದಕ್ಕೆ ಸಮಾಧಾನವಾಗುವುದೆಂದೂ ಇನ್ನೊಂದು ವಿವರಣೆ. ಮರಣಾವಸರದ ಅಳುವಿಗೆ ಒಂದು ಶೈಲಿ. ವಸ್ತುವಿನಲ್ಲಿ ಏಕತಾನತೆ ಇರುತ್ತದೆ. ಇಂಗ್ಲಿಷ್‍ನಲ್ಲಿ ಇದನ್ನು ಡರ್ಜ್ ಎನ್ನುತ್ತಾರೆ. 

	ಶವಕ್ಕೆ ಅದರ ಸಮಾಧಿಯ ಅಥವಾ ದಹನದ ಮುನ್ನ ಕೆಲವು ಉಪಚಾರಗಳು ನಡೆಯುವ ಪದ್ಧತಿ ಎಲ್ಲ ದೇಶಗಳಲ್ಲಿದೆ. ಸಾಮಾನ್ಯವಾದ ಸಂಪ್ರದಾಯವೆಂದರೆ ಶವವನ್ನು ತೊಳೆದು ಹೊಸಬಟ್ಟೆಯಿಂದ ಮುಚ್ಚುವುದು. ಜರ್ಮನಿಯಲ್ಲಿ ಶವಕ್ಕೆ ಮದುವಣಿಗನ ಅಲಂಕಾರ ಮಾಡಿ ಆಭರಣಗಳನ್ನು ತೊಡಿಸುವುದುಂಟು. ಪ್ರೇತಲೋಕಕ್ಕೆ ಹೋಗುವಾಗ ವೈಭವದಿಂದ ಕಾಣಬೇಕೆಂಬುದೇ ಇದರ ಕಲ್ಪನೆ. ಇದಾದ ನಂತರ ಶವವನ್ನು ಕಟ್ಟುತ್ತಾರೆ; ಸಮಾಧಿಸ್ಥಳಕ್ಕೊ ಶ್ಮಶಾನಕ್ಕೊ ಕೊಂಡೊಯ್ಯಲು ಅನುಕೂಲವಾಗುವಂತೆ ಕಟ್ಟುವಾಗ ದೇಹದ ಭಂಗಿಯು ಕೈಗಳನ್ನು ಎದೆಯ ಮೇಲಿಟ್ಟುಕೊಂಡು ಕಾಲುಗಳನ್ನು ಮಡಿಸಿಕೊಂಡಿರುವುದು ಭಾರತದಲ್ಲಿ ಮಾತ್ರವಲ್ಲ, ಎಲ್ಲ ದೇಶಗಳಲ್ಲಿಯೂ ಉಂಟು. ಬಸುತೋ ಮುಂತಾದ ದೇಶಗಳಲ್ಲಿ ಕೈಕಾಲುಸಂಧಿಗಳನ್ನು ಮುರಿದು ಮಡಿಸುವ ಪದ್ಧತಿಯಿದೆ. ಇದು ಮಗುವಿನ ಜನನ ಭಂಗಿಯನ್ನು ಅನುಕರಿಸುವ ಉದ್ದೇಶದಿಂದ ಮೂಡಿಬಂದ ಪದ್ಧತಿ ಎಂದು ಹೇಳುತ್ತಾರೆ. ಶವವನ್ನು ತೊಳೆದ ನೀರನ್ನೂ ಪಾತ್ರೆಯನ್ನೂ ಬಿಸಾಡುವ ಸಂಪ್ರದಾಯವಿದೆ. ಆಫ್ರಿಕ, ಆಸ್ಟ್ರೇಲಿಯ ದೇಶದ ಆದಿವಾಸಿಗಳಲ್ಲಿ ಶವವನ್ನು ಸಮಾಧಿ ಮಾಡಲು ನಿರ್ದಿಷ್ಟವಾದ ಸಮಯವನ್ನು ದೈವಜ್ಞರು ನಿರ್ಧರಿಸುತ್ತಾರೆ. ಕೆಲವೊಮ್ಮೆ ಮರಣವಾದ ಬಳಿಕ ಹಲವಾರು ತಿಂಗಳುಗಳೂ ವರ್ಷವೂ ಆಗುವುದುಂಟು. ಆ ಸಮಯದ ತನಕ ಶವವನ್ನು ಉಳಿಸಿಕೊಳ್ಳುವ ಸಂವಿಧಾನಗಳೂ ಪ್ರಚಲಿತವಾಗಿವೆ. ರಾಜರ, ರಾಜಮನೆತನದವರ ಶವವನ್ನು ಚಿರಂತನವಾಗಿ ಉಳಿಸಿಕೊಳ್ಳುವುದೂ ಉಂಟು. ಅವರ ಆತ್ಮಗಳಿಗೆ ನೆಲೆಯಿರಲೆಂಬ ಉದ್ದೇಶದಿಂದ ಶವದ ಆಕಾರ ಕೆಡದಂತೆ ಅದು ಸ್ಥಾಯಿಯಾಗಿ ಉಳಿಯುವಂತೆ ಮಾಡುವುದಕ್ಕೆ ಮಮ್ಮಿಫಿಕೇಷನ್ ಎನ್ನುತ್ತಾರೆ. ಈಜಿಪ್ಟ್‍ನಲ್ಲಿ ಇದು ಕಲೆಯಾಗಿ ಪರಿಣಮಿಸಿತು. ದೇವಾಲಯಗಳ ಪರಿಸರದಲ್ಲಿ ಬೀಭತ್ಸವಾದ ಪ್ರೇತಾಗಾರಗಳನ್ನು ನಿರ್ಮಿಸಿ ಅದರಲ್ಲಿ ಮಮ್ಮಿಗಳನ್ನು ಇರಿಸುತ್ತಿದ್ದರು. ಸಾವಿರಾರು ವರ್ಷಗಳ ಮಮ್ಮಿಗಳು ಇಂದಿನತನಕವೂ ಉಳಿದಿವೆ. 

	ಮರಣದಿಂದ ಹತ್ತಿರ ಇದ್ದವರಿಗೆ ಮೈಲಿಗೆ ಎಂಬ ನಂಬಿಕೆ ವಿಶ್ವವ್ಯಾಪಿಯಾದುದು. ಶವವನ್ನು ಶ್ಮಶಾನಕ್ಕೆ ಕೊಂಡೊಯ್ದು ಅನಂತರ ಮನೆಯನ್ನು ಶುದ್ದಿಮಾಡುವ ಸಂಪ್ರದಾಯ ಎಲ್ಲೆಡೆಯಲ್ಲಿಯೂ ಇದೆ. ಸತ್ತವನ ಬಟ್ಟೆ ಬರೆಗಳನ್ನು ಬೇರೆ ಯಾರೂ ಉಪಯೋಗಿಸುವುದಿಲ್ಲ. ಮರಣದ ಮೈಲಿಗೆ ಹತ್ತಿರದ ನೆಂಟರನ್ನು ಹತ್ತು, ಏಳು, ಮೂರುದಿನಗಳ ತನಕ ದೂರವಿಟ್ಟಿರುವ ಪದ್ಧತಿ ಭಾರತದಲ್ಲಿ ಮಾತ್ರವೇ ಅಲ್ಲ ಯೂರೊಪ್ ದೇಶದ ಹಲವಾರು ಜನಾಂಗಗಳಲ್ಲಿ ಇದೆ. ಈ ಅವಧಿಯಲ್ಲಿ ಸತ್ತವನ ನೆಂಟರು ಅಲಂಕಾರ ಮಾಡಿಕೊಳ್ಳುವುದಿಲ್ಲ; ಶುಭಕರ್ಮಗಳಲ್ಲೂ ಸಂತೋಷ ಸಮಾರಂಭಗಳಲ್ಲೂ ಭಾಗವಹಿಸುವುದಿಲ್ಲ. ಹೀಗೆ ಮಾಡುವುದು ಅಮಂಗಳವೆಂದು ಕಲ್ಪನೆ, ಶವವೂ ಅದಕ್ಕೆ ಸಂಬಂಧವಿದ್ದವರೂ ತೀರ ಮೈಲಿಗೆಯೆಂಬುದೂ ಹೆಣದ ಹತ್ತಿರ ಹೋದ ಇತರರೂ ಒಡನೆಯೇ ಹಿಂತಿರುಗಿ ಸ್ನಾನಮಾಡಿ ಮಡಿಮಾಡಿ ಬಟ್ಟೆಗಳನ್ನು ಉಡಬೇಕೆಂಬುದೂ ಎಲ್ಲೆಲ್ಲಿಯೂ ಹರಡಿರುವ ಪದ್ಧತಿ. ಮರಣದ ಅಂಜಿಕೆ ಅದರ ಸೋಂಕು ಕೂಡ ಮರಣವನ್ನು ತಂದೀತೆಂಬ ಭಯ ಇದಕ್ಕೆ ಕಾರಣವಿರಬಹುದು. ಹಳೆಯ ಕಾಲದಲ್ಲಿ ಯುದ್ಧಮಾಡುವಾಗ ಹತ್ಯೆಗಳನ್ನು ನಡೆಸಿದ ಸೈನಿಕ ಕೂಡ ಮೈಲಿಗೆಯೆಂಬ ಭಾವನೆಯಿದ್ದಿತು. ಕೊಲೆ ನಡೆಸಿದವನೂ ಶುದ್ಧಿ ಮಾಡಿಕೊಳ್ಳಬೇಕಾಗಿದ್ದಿತು. ಈ ಮೈಲಿಗೆ ಮನೆಗೂ ಬೀದಿಗೂ ಕೇರಿಗೂ ಊರಿಗೂ ಅನ್ವಯಿಸುತ್ತಿದ್ದಿತು. ಆದಿವಾಸಿಗಳಲ್ಲಿ ಯಾರಾದರೊಬ್ಬರು ತೀರಿಕೊಂಡರೆ ಮೈಲಿಗೆ ಇಡೀ ಜನಾಂಗಕ್ಕೆ ಇರುತ್ತದೆ; ಶವಸಂಸ್ಕಾರಗಳಲ್ಲಿ ಎಲ್ಲರೂ ಪಾಲುಗೊಳ್ಳುತ್ತಾರೆ. ಹಿಂದೂಗಳಲ್ಲಿ ಕೂಡ ಯಾವುದಾದರೊಂದು ಮರಣ ಸಂಭವಿಸಿದರೆ ಶವವನ್ನು ಕೊಂಡೊಯ್ಯುವತನಕ ಆ ಬೀದಿಯ ಜನರು ಊಟ ಮಾಡುವುದಿಲ್ಲ. ಈ ಪದ್ಧತಿ ಎಲ್ಲ ಪ್ರಾಂತ್ಯಗಳಲ್ಲಿಯೂ ಉಂಟು.

	ಅಂತ್ಯ ಸಂಸ್ಕಾರವಾಗುವತನಕ ಸತ್ತವನ ಆತ್ಮಕ್ಕೆ ಸದ್ಗತಿ ದೊರೆಯದೆಂದೂ ಅದಾಗದೆ ಸತ್ತವ ಪ್ರೇತವಾಗಿಯೇ ಇದ್ದುಕೊಂಡು ಬದುಕಿರುವವರನ್ನು ಕಾಡುವನೆಂದೂ ನಂಬಿಕೆಯಿದೆ. ಶವವನ್ನು ಮಂತ್ರದಿಂದ ಶುದ್ಧಿಮಾಡಿದ ಸ್ಥಳದಲ್ಲಿಯೇ ಹೂಳಬೇಕೆಂಬ ನಿಯಮ ಕ್ರೈಸ್ತರಲ್ಲಿದೆ. ಹಾಗೆಯೇ ಹಿಂದೂಗಳಲ್ಲಿ ದಹನಮಾಡುವಾಗಲೂ ಭೂಶುದ್ಧಿ ಮಾಡುತ್ತಾರೆ. ವಿಧಿವತ್ತಾಗಿ ಅಂತ್ಯ ಸಂಸ್ಕಾರ ಮಾಡುವ ಅಗತ್ಯ ಕೆಲವು ಸಂದರ್ಭಗಳಲ್ಲಿ ಇರುವುದಿಲ್ಲ. ಎಳೆಯ ಮಕ್ಕಳು ಸತ್ತರೆ ಹಿಂದೂಗಳಲ್ಲಿ ದಹನಮಾಡುವುದಿಲ್ಲ, ಹೂಳುತ್ತಾರೆ; ಅವರಿಗೆ ಶ್ರಾದ್ಧಾದಿಕರ್ಮಗಳೂ ಇಲ್ಲ. ಆದಿವಾಸಿ ಜನರಲ್ಲಿಯೂ ಎಳೆಯಮಕ್ಕಳು, ಗುಲಾಮರು, ತೀರಸಾಮಾನ್ಯ ಜನ ಸತ್ತರೆ ಅಥವಾ ದುರ್ಮರಣವಾದರೆ, ಆತ್ಮಹತ್ಯೆಯಾದರೆ ಇಂಥ ಸಂದರ್ಭಗಳಲ್ಲಿಯೂ ಅಂತ್ಯಸಂಸ್ಕಾರ ನಡೆಯುವುದಿಲ್ಲ. ಆತ್ಮಹತ್ಯೆ ಪಾಪವೆಂದು ನಂಬುವುದು ಎಲ್ಲ ದೇಶಗಳಲ್ಲಿಯೂ ಎಲ್ಲ ಜನಾಂಗಗಳಲ್ಲಿಯೂ ಉಂಟು. ಅಪಮೃತ್ಯು (ನೀರಿನಲ್ಲಿ ಮುಳುಗಿ, ಹಾವುಕಚ್ಚಿ, ವನ್ಯಮೃಗಗಳಿಂದ, ಮರದ ಮೇಲಿಂದ ಬಿದ್ದು ಸಾವು) ದೇವತೆಗಳ ಆಗ್ರಹದಿಂದ ಆದುದೆಂದು ಬಗೆದು ಇಂಥ ಸಂದರ್ಭಗಳಲ್ಲಿ ಕೂಡ ಅಂತ್ಯಸಂಸ್ಕಾರವನ್ನು ಸಾಂಗವಾಗಿ ಮಾಡದಿರುವುದು ಆದಿವಾಸಿಗಳಲ್ಲಿ ಬಳಕೆಯಲ್ಲಿರುವ ಪದ್ಧತಿ. ಮಧ್ಯಕಾಲದ ಯೂರೋಪಿನಲ್ಲಿ ಋಣದಿಂದ ಮುಕ್ತನಾಗದೆ ಸತ್ತವನನ್ನು ಅವನ ವಂಶೀಕರು ಋಣವನ್ನು ತೀರಿಸುವತನಕ ಶವವನ್ನು ಅಂತ್ಯಕ್ರಿಯೆ ಮಾಡಗೊಡದೆ ಹಿಡಿದಿರುವುದು ಪ್ರಚಲಿತವಾಗಿದ್ದಿತು. ಭಾರತದಲ್ಲಿ ಈ ಪದ್ಧತಿ ಅಲ್ಲಲ್ಲಿ ಇದ್ದಂತೆ ತಿಳಿದುಬರುತ್ತದೆ.

	ಶವವನ್ನು ಮುಗಿಸುವ ಪದ್ಧತಿಯಲ್ಲಿ ತುಂಬ ವೈವಿಧ್ಯ ಇದೆ. ಹಲವು ಆದಿವಾಸಿ ಜನಾಂಗಗಳಲ್ಲಿ ಶವವನ್ನು ಆ ಜನಾಂಗದವರು ತಿನ್ನುವ ಪದ್ಧತಿ ಇತ್ತು. ಮಾನವಾಹಾರಿ (ಕ್ಯಾನಿಬಾಲಿಸಮ್) ಜನಾಂಗಗಳು ಈ ಕಾಲಕ್ಕೆ ಇಲ್ಲವೆಂದೇ ಹೇಳಬಹುದು. ಪ್ರಾಚೀನವಾದ ಇನ್ನೊಂದು ಸಂಪ್ರದಾಯವೆಂದರೆ ಹೆಣವನ್ನು ಹಾಗೆಯೇ ಬಿಟ್ಟುಹೋಗುವುದು. ತೀರ ಪ್ರತಿಷ್ಠಿತ ವ್ಯಕ್ತಿಗಳಷ್ಟೇ ಸಮಾಧಿ ಪಡೆಯುತ್ತಿದ್ದರು. ಉಳಿದವರೆಲ್ಲ ಕಾಗೆ, ಗೂಗೆ, ಹದ್ದು, ನಾಯಿ, ನರಿ ಇವುಗಳಿಂದ ತಿನ್ನಲ್ಪಟ್ಟು ಗಾಳಿಗೆ ಬೆಳಕಿಗೆ ಮೈಒಡ್ಡಿ ಮುಗಿಯಬೇಕಾಗಿದ್ದಿತು. ಪಾರ್ಸಿ ಜನರಲ್ಲಿ ಹೆಣವನ್ನು ಹೂಳುವ ಅಥವಾ ಸುಡುವ ಅಭ್ಯಾಸ ಇಲ್ಲ. ನಾಯಿ ಹದ್ದುಗಳಿಗೆ ಆಹಾರವಾಗಿ ನಾಶವಾಗುವುದೇ ಸರಿಯಾದ ಶವಸಂಸ್ಕಾರವೆಂದು ಅವರ ಕಲ್ಪನೆ. ಇದಕ್ಕಾಗಿ ಊರಾಚೆ ಮೌನಕ್ಷೇತ್ರಗಳನ್ನು (ಟವರ್ ಆಫ್ ಸೈಲೆನ್ಸ್) ಮಾಡಿಟ್ಟಿರುತ್ತಾರೆ. ಇದನ್ನು ದಖ್ಮಾ ಎನ್ನುತ್ತಾರೆ. ಅಗ್ನಿಯೂ ಭೂಮಿಯೂ ಪವಿತ್ರವಾದುದೆಂಬ ಭಾವನೆಯಿಂದ ಸುಡುವುದೂ ನಿಷಿದ್ದ. ಕೆಲವು ಜನಾಂಗಗಳಲ್ಲಿ ಹೆಣವನ್ನು ಕಾಡಿನಲ್ಲಿ ಇಡುತ್ತಾರೆ; ಮರದ ಮೇಲೆ ಬಿಡುತ್ತಾರೆ ಅಥವಾ ಅದಕ್ಕೆಂದೇ ಎತ್ತರದ ಚಪ್ಪರ ಕಟ್ಟಿ ಅದರ ಮೇಲೆ ಇರಿಸುತ್ತಾರೆ. ಕೆನಡ, ಅಮೆರಿಕ ಶ್ರೀಲಂಕಾದ ಆದಿವಾಸಿಗಳು ಎಸ್ಕಿಮೋಗಳು ಈ ಜನಾಂಗಗಳಲ್ಲಿ ಇದೇ ಪದ್ಧತಿ ಇದೆ. ಇನ್ನೊಂದು ಪ್ರಾಚೀನ ಪದ್ಧತಿಯೆಂದರೆ ಕಾಡಿನಲ್ಲಿ ಗುಹೆಯ ಒಳಗೆ ಶವವನ್ನು ನಿಕ್ಷೇಪಮಾಡುವುದು ಅಲಾಸ್ಕದಿಂದ ಮೆಕ್ಸಿಕೋದವರೆಗೆ ಹಲವು ಹಳೆಯ ಜನರಲ್ಲಿ ಈ ಸಂಪ್ರದಾಯ ಇಂದಿಗೂ ಕಾಣಬರುತ್ತದೆ. ಪ್ರಾಕೃತಿಕವಾದ ಗುಹೆ ಇಲ್ಲದಿದ್ದಾಗ ಕೃತಕವಾದ ಗುಹೆಯನ್ನು ಶವನಿಕ್ಷೇಪಕ್ಕೆಂದು ನಿರ್ಮಾಣಮಾಡುತ್ತಿದ್ದರು. ಇದಕ್ಕೆ ಸೆಪಲ್ಷರ್ ಎಂದು ಹೆಸರು. ಪ್ರಪಂಚದ ಹಲವೆಡೆ ಭಾರತದಲ್ಲಿ ಪಂಜಾಬ್ ಪ್ರಾಂತ್ಯದ ಭಗರ್ ಪಂಥಿಜನರಲ್ಲಿ ಶವವನ್ನು ನೀರಿನೂಳಗೆ ಬಿಸಾಡುವ ಸಂಪ್ರದಾಯ ಇದೆ. ಜಲಸಮಾಧಿಯಿಂದ ಸತ್ತವನ ಪ್ರೇತ ಉಳಿದವರನ್ನು ಕಾಡಲಾರದು ಎಂಬ ನಂಬಿಕೆ ಈ ಪದ್ಧತಿಯ ಮೂಲ. ಈಗ ಇದರ ಬಳಕೆ ಅಷ್ಟಾಗಿ ಇಲ್ಲ. 

	ಆದರೆ ಪ್ರಪಂಚದ ತುಂಬ ಪ್ರಚಲಿತವಾಗಿರುವ ಪದ್ಧತಿ ಎಂದರೆ ಹೂಳುವುದು. ಊರ ಹೊರಗೆ ಕಾಡಿನ ನಡುವೆ ಹೂಳಲೆಂದೇ ವ್ಯವಸ್ಥಿತವಾದ ಸ್ಥಳವೊಂದು ಇರುತ್ತಿದ್ದಿತು. ಇದಕ್ಕೆ ಸಾಮಾನ್ಯವಾಗಿ ಮೈಲಿಗೆಯ ಸೋಂಕು ಇದ್ದು ಇಲ್ಲಿಗೆ ಯಾರೂ ಬರುತ್ತಿರಲಿಲ್ಲ. ಸತ್ತವನನ್ನು ಸಮಾಧಿಮಾಡಲು ಬರುವವರು ಮಾತ್ರ ಬಂದು ಇಲ್ಲಿಂದ ಮರಳುವಾಗ ಸ್ನಾನಮಾಡಿಕೊಂಡು ಶುದ್ಧರಾಗಿ ಮನೆಗೆ ಹೋಗುತ್ತಿದ್ದರು. ಪಾಶ್ಚಾತ್ಯದೇಶಗಳಲ್ಲಿ ಹಿಂದಿನ ಕಾಲಕ್ಕೆ ಯಾವುದಾದರೊಂದು ಗುಡ್ಡದ ಮೇಲೆ ಸಮಾಧಿಕ್ಷೇತ್ರವಿರುತ್ತಿದ್ದಿತು. ಆದಿವಾಸಿ ಜನರಲ್ಲಿ ಯಾರನ್ನು ಎಲ್ಲಿ ಹೂಳಬೇಕೆಂಬುದನ್ನು ಯಕ್ಷಿಣಿವಿದ್ಯೆಯಿಂದ ತಿಳಿದುಕೊಳ್ಳಬೇಕಾಗಿದ್ದಿತು. ಅವರಲ್ಲಿ ಸಮಾಧಿಕ್ಷೇತ್ರವೆಂಬ ಪ್ರತ್ಯೇಕ ಸ್ಥಳವಿರುತ್ತಿರಲಿಲ್ಲ. ಒಂದೊಂದು ಮನೆಗೂ ಪ್ರತ್ಯೇಕವಾದ ಸಮಾಧಿಕ್ಷೇತ್ರವಿರುತ್ತಿದ್ದುದೂ ಉಂಟು. ಒಂದೊಂದು ಜನಾಂಗಕ್ಕೆ ಒಂದೊಂದು ಸಮಾಧಿಕ್ಷೇತ್ರವಿರುವುದು ಇಂದಿಗೂ ಉಂಟು. ಇಂಥ ಸಂದರ್ಭಗಳಲ್ಲಿ ಈ ಸಮಾಧಿಕ್ಷೇತ್ರ ಇಡೀ ಜನಾಂಗದ ಆಸ್ತಿ. ಆ ಜನಾಂಗಕ್ಕೆ ಸೇರಿದ ಎಲ್ಲರಿಗೂ ಹಕ್ಕು ಉಂಟು. ಕೆಲವು ಆದಿವಾಸಿಗಳು ಸತ್ತವನನ್ನು ಒಂದು ಗುಡಿಸಲಲ್ಲಿ ಇಟ್ಟು ಶವ ಕೊಳೆತು ನಾರುವ ತನಕವೂ ಅಲ್ಲಿಯೇ ಇದ್ದು ಅಳುತ್ತಾರೆ. ಆನಂತರ ಎತ್ತರವಾದ ಬಿದಿರು ವೇದಿಕೆ ಕಟ್ಟಿ ಕೊಳೆತ ಹೆಣವನ್ನು ಅದರ ಮೇಲೆ ಇಡುತ್ತಾರೆ. ಎಲುಬುಗಳು ಉಳಿದಾಗ ಅವನ್ನು ಆಯ್ದು ಅದೇ ಗುಡಿಸಲಲ್ಲೇ ಗುಣಿತೋಡಿ ಹೂಳುತ್ತಾರೆ. ಮುಂದೆ ಆ ಗುಡಿಸಲನ್ನು ಉಳಿದವರು ಯಾರೂ ಉಪಯೋಗಿಸುವುದಿಲ್ಲ. ದಕ್ಷಿಣ ಅಮೆರಿಕದ ಆದಿವಾಸಿ ಜನಾಂಗವೊಂದರಲ್ಲಿ ಸತ್ತವನ ಮೇಲೆ ಅವನ ಮನೆಯನ್ನೇ ಬೀಳಿಸಿ ಅಲ್ಲೇ ಸಮಾಧಿಮಾಡಿಬಿಡುವ ಪದ್ಧತಿಯೂ ಉಂಟು.

	ಸುಡುವ ಪದ್ಧತಿಯೂ ಪ್ರಪಂಚಾದ್ಯಂತ ಪ್ರಚಲಿತವಾಗಿದೆ. ಭಾರತದಲ್ಲಿ ತತ್ರಾಪಿ ಹಿಂದೂ ಜನರಲ್ಲಿ ಇದೇ ಪ್ರಮುಖ ಶವಸಂಸ್ಕಾರ. ಶವ ಯಾವ ಬಗೆಯಲ್ಲಾದರೂ ಶ್ಮಶಾನದಲ್ಲಿ ಉಳಿದಿದ್ದರೆ ಅದರಿಂದ ಅಭಿಚಾರಿಕ ಕ್ರಿಯೆಗಳನ್ನು ಮಾಡಬಹುದು. ಆದ ಕಾರಣ ಶವವನ್ನು ಸುಟ್ಟು ಬೂದಿಮಾಡಿದರೆ ಮಾಂತ್ರಿಕರಿಗೆ ಇಂಥ ಕ್ರಿಯೆಗಳನ್ನು ನಡೆಸಲು ಆಸ್ಪದವಿಲ್ಲ ಎಂಬ ಕಲ್ಪನೆ ಈ ಪದ್ಧತಿಗೆ ಮೂಲವೆಂದು ಹೇಳುತ್ತಾರೆ. ಪ್ರೇತಕ್ಕೂ ದೇಹದಿಂದ ಸಂಪೂರ್ಣವಾದ ಮುಕ್ತಿ ದೊರೆಯುವುದು ದಹನದಿಂದ ಎಂಬ ನಂಬಿಕೆಯೂ ಉಂಟು. ದಹನಪದ್ಧತಿ ಇದ್ದಕಡೆ ದಗ್ಧವಾಗದೆ, ಉಳಿದ ಎಲುಬು ಮುಂತಾದ ಭಾಗಗಳನ್ನು ಆಯ್ದುಕೊಂಡು (ಅಸ್ಥಿ ಸಂಚಯನ) ಅವನ್ನು ಕುಟ್ಟಿಪುಡಿಮಾಡಿ ಗಾಳಿಗೆ ಹಾರಿಬಿಡುತ್ತಾರೆ, ಇಲ್ಲವೆ ಹರಿಯುವ ನದಿಯಲ್ಲಿ ಕದಡಿ ಬಿಡುತ್ತಾರೆ. ಚಿತಾಭಸ್ಮವನ್ನು ಕಲಶದಲ್ಲಿ ಸಂಗ್ರಹಿಸಿ ಅದನ್ನು ಹೂಳುವ ಅಥವಾ ಅದರ ಮೇಲೆ ಬೃಂದಾವನವನ್ನು ಕಟ್ಟಿಸುವ ಪದ್ಧತಿ ಭಾರತದಲ್ಲಿ ಮಾತ್ರವಲ್ಲದೆ ಹಲವಾರು ಆದಿವಾಸಿ ಜನಾಂಗಗಳಲ್ಲಿಯೂ ಉಂಟು. 

	ಮರಣೋತ್ತರ ಕ್ರಿಯೆಗಳ ವಿಚಾರವಾಗಿ ದೇಶದೇಶಗಳಲ್ಲಿ ವೈವಿಧ್ಯ ಉಂಟು. ಸತ್ತವನನ್ನು ಕಂಡರೆ ಭೀತಿ, ಸತ್ತವನಿಗಾಗಿ ಶೋಕ ಎರಡೂ ಈ ಕ್ರಿಯೆಗಳಲ್ಲಿ ಅವಶ್ಯವಾಗಿ ಕಾಣುತ್ತೇವೆ. ಸತ್ತವನ ಪ್ರೇತ ಹಿಂತಿರುಗಿಬಾರದಂತೆ ತಡೆಗಟ್ಟುವ ಮಂತ್ರಗಳೂ ವಿಧಿಗಳೂ ಎಲ್ಲ ಜನರ ಮರಣೋತ್ತರ ಸಂಸ್ಕಾರಗಳಲ್ಲಿ ಉಂಟು. ಪ್ರೇತಕ್ಕೂ ಉಳಿದವರಿಗೂ ಸಂಬಂಧ ಸಂಪೂರ್ಣವಾಗಿ ಹರಿಯಿತೆಂದು ಸ್ಪಷ್ಟಪಡಿಸುವುದು ಶ್ರಾದ್ಧದ ಮುಖ್ಯ ಉದ್ದೇಶ. ಪ್ರಚಲಿತವಾಗಿರುವ ಪದ್ಧತಿಗಳಿಂದ ಇದು ತಿಳಿದುಬರುತ್ತದೆ. ಒಂದುಕಾಲಕ್ಕೆ ರಾಜನೋ, ನಾಯಕನೋ, ಸತ್ತರೆ ಅವನ ಹೆಂಡಿರನ್ನೂ ಗುಲಾಮರನ್ನೂ ಶವದೊಂದಿಗೆ ಸಜೀವ ಸಮಾಧಿ ಮಾಡುವ ಅಭ್ಯಾಸ ಇದ್ದಿತು. ಭಾರತದಲ್ಲಿ ಗಂಡ ಸತ್ತರೆ ಹೆಂಡತಿಯೂ ಚಿತೆಯೊಳಗೆ ದುಮುಕಿ ಸಹಗಮನ (ಸತೀ) ಮಾಡುವ ಪದ್ಧತಿ ಬಂಗಾಲದಲ್ಲಿ ಪ್ರಚಲಿತವಾಗಿತ್ತು. ಗ್ರೀಕ್ ದೇಶದಲ್ಲಿ ಮುಖ್ಯವ್ಯಕ್ತಿಯೊಬ್ಬ ಸತ್ತರೆ ಅವನ ಸಮಾಧಿಯೊಳಗೆ ನೆಚ್ಚಿನ ಮಿತ್ರನೊಬ್ಬ ಉಳಿಯುತ್ತಿದ್ದ. ಇದಕ್ಕೂ ಮೇಲೆ ಹೇಳಿದ ಕಾರಣವೇ ಇದ್ದರೂ ಪ್ರೇತದ ಸಂಗಾತಿಗಳಾಗಿ ಅವನಿಗೆ ಪ್ರಿಯರಾಗಿದ್ದವರನ್ನು ಕಳುಹಿಸುವ ಕಾರಣವನ್ನೂ ಹೇಳುತ್ತಾರೆ. ರೋಮ್, ಈಜಿಪ್ಟ್, ದೇಶಗಳಲ್ಲಿ ಆ ವ್ಯಕ್ತಿಯ ಕುದುರೆ, ಪದಾತಿ ಮುಂತಾದ ವಿಶಿಷ್ಟ ಪರಿಕರಗಳ್ನೂ ಶವದೊಂದಿಗೆ ಹೂಳಿಬಿಡುವ ಪದ್ಧತಿಯಿತ್ತು. ಎಂದರೆ ತೀರಿಕೊಂಡ ಆ ವ್ಯಕ್ತಿಗೆ ಸಂಬಂಧಪಟ್ಟದ್ದು, ಪ್ರಿಯವಾದುದು ಏನೂ ನಮ್ಮ ನಡುವೆ ಇರಬಾರದೆಂಬ ಕಾತರ ಇಲ್ಲಿ ಕಾಣುತ್ತದೆ. ತೀರಿಕೊಂಡ ಅವನನ್ನು ಇರಿಸಿದ ಸಮಾಧಿಯಲ್ಲಿಯೇ ಸುಖವಾಗಿ ಇರಲೆಂಬ ಬಯಕೆಯೂ ಸ್ಪಷ್ಟವಾಗುತ್ತದೆ. ಮರಣೋತ್ತರದ ಸಮಾರಾಧನೆಗಳಲ್ಲಿ ಸತ್ತವನೇ ಭಾಗವಹಿಸುತ್ತಾನೆಂಬ ಕಲ್ಪನೆ ಇದ್ದರೂ ಶ್ರಾದ್ಧಕ್ರಿಯೆಯಿಂದ ಪ್ರೇತವನ್ನು ಪಿತೃಲೋಕಕ್ಕೆ ಸಾಗಹಾಕಿದೆವೆಂಬ ಸಂತೋಷ, ಸಮಾಧಾನಗಳು ಇಲ್ಲವೆನ್ನಲಾಗದು. ಮರಣ ದುಃಖಕರವಾದ ಪ್ರಸಂಗವಾದರೂ ಶ್ರಾದ್ಧ ಸುಖಕ್ಕೆ ದಾರಿ ಮಾಡಿಕೊಡುವುದುಂಟು.

	ಪರಲೋಕ ಇದೆಯೆಂದು ನಂಬುವವರಿಗೆ ಸಾವು ಒಂದು ಅವಸ್ಥಾಂತರವಷ್ಟೆ. ವ್ಯವಹಾರದಲ್ಲಿ ಅನಿಷ್ಟವಾದ, ಭಯಾನಕವಾದ ಪ್ರಸಂಗವಾದರೂ ತಾತ್ತ್ವಿಕವಾಗಿ ಇದರಲ್ಲಿ ಭೀತಿಯಾಗಲೀ ಹೇಸಿಗೆಯಾಗಲೀ ಇಲ್ಲ. ಹಿಂದೂಗಳಿಗೆ ಇದು ಅಗತ್ಯವಾದ ಪರಿವರ್ತನೆಯೆಂದು ಕಂಡುಬರುತ್ತದೆ. ಮನುಷ್ಯ ಹಳೆಯಬಟ್ಟೆಗಳನ್ನು ಬಿಸುಟು ಹೊಸ ಬಟ್ಟೆಗಳನ್ನು ಉಡುವಂತೆ ಜೀವವೂ ಜೀರ್ಣವಾದ ದೇಹವನ್ನು ಬಿಟ್ಟು ಹೊಸದೇಹವನ್ನು ತಳೆಯುತ್ತದೆ. ಸಂಸಾರ ಚಕ್ರದಲ್ಲಿ ಜನನ-ಮರಣಗಳು ಅನುಕ್ರಮವಾಗಿ ಅವ್ಯಾಹತವಾಗಿ ಒದಗಿ ಬರುತ್ತವೆ. ಜನನದಂತೆ ಮರಣವೂ ನಿಸರ್ಗಸಿದ್ಧವಾದುದ್ದು, ಅನಿವಾರ್ಯವಾದುದು. ಆದರೆ ಜೀವದ ಸದ್ಗತಿಗಾಗಿ ಮತ್ರ್ಯಲೋಕಕ್ಕೆ ಮರಳದಂತೆ ಹಲವಾರು ಸಂಸ್ಕಾರಗಳು ವಿಧ್ಯುಕ್ತವಾಗಿವೆ. ಷೋಡಶ ಸಂಸ್ಕಾರಗಳಲ್ಲಿ ಗರ್ಭಧಾರಣೆಯಿಂದ ಆರಂಭವಾದುದು ಅಂತ್ಯೇಷ್ಟಿಯಲ್ಲಿ ಮುಗಿಯತ್ತದೆ. ಅಂತ್ಯೇಷ್ಟಿ ಅಥವಾ ಅಪರಕರ್ಮ ತುಂಬು ವಿಶಿಷ್ಟವಾದ ಸಂಸ್ಕಾರ. ಇದನ್ನು ಈ ಕಾಲದಲ್ಲಿಯೂ ಶ್ರದ್ಧೆಯಿಂದ ನಡೆಸುತ್ತಾರೆ. ಈ ಕಾರಣದಿಂದಲೇ ಇದಕ್ಕೆ ಶ್ರಾದ್ಧ ಎಂಬ ಅಭಿದಾನವಿರುವುದು. ಶ್ರಾದ್ಧದಲ್ಲಿ ಏಕೋದಿಷ್ಟ, ಸಪಿಂಡೀಕರಣ ಎಂಬ ಎರಡು ಹಂತಗಳುಂಟು. ಏಕೋದಿಷ್ಟ ಸತ್ತ ಒಬ್ಬನನ್ನೇ ಕುರಿತು ಮಾಡತಕ್ಕ ಮರಣೋತ್ತರ ಸಂಸ್ಕಾರ. ಆದರೆ ಇದು ಅಪೂರ್ಣವಾದುದು. ಪ್ರೇತವಾಗಿ ಪರಿವರ್ತಿತವಾದ ಜೀವ ಪಿತೃಲೋಕಕ್ಕೆ ಸಂದು ಅದು ಪಿತೃವಾಗಿ ಪರಿಣಮಿಸುವುದು ಸಪಿಂಡೀಕರಣಶ್ರಾದ್ಧ. ಪಿತೃವಾದ ಆತ್ಮ ಮತ್ತೆ ಆಹ್ವಾನಿತವಾಗುವತನಕ (ಶ್ರಾದ್ಧ ಸಮಯದಲ್ಲಿ) ಕೆಳಕ್ಕೆ ಬರುವುದಿಲ್ಲ. ಇವುಗಳ ತೃಪ್ತಿಯ ಸಲುವಾಗಿ ತರ್ಪಣ, ದಾನಾದಿಗಳನ್ನು ಕೊಡುವ ಸಂಪ್ರದಾಯ ಇದೆ. ಜಾತಕರ್ಮ ಸಂಸ್ಕಾರದಿಂದಾಗಿ ಭೂಮಿಯನ್ನು ಜಯಸಿದರೆ ಅಂತ್ಯೇಷ್ಟಿಯಿಂದ ಸ್ವರ್ಗವನ್ನು ಜಯಿಸುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ. 

	ಬೌದ್ಧರ ದೃಷ್ಟಿಯಲ್ಲಿ ಸಂಸಾರದ ಅನಿವಾರ್ಯವಾದ ಸಂಧಿ ಮರಣ (ಚ್ಯುತಿ) ಎನಿಸಿಕೊಳ್ಳುತ್ತದೆ. ಉತ್ಪನ್ನವಾದ ಎಲ್ಲ ವಸ್ತುಗಳೂ ಸ್ವಲ್ವಕಾಲ ಇದ್ದು (ಸ್ಥಿತಿ) ಅನಂತರ ಅವಶ್ಯವಾಗಿ ಭಂಗವಾಗುವುದು ನಿಯಮ. ಮರಣ ಮನುಷ್ಯನಲ್ಲಿ ಭಯವನ್ನೂ ಉಂಟುಮಾಡಿ ದುಃಖಕ್ಕೆ ಕಾರಣ ಆಗುತ್ತದೆ. ಜರಾಮರಣಗಳು ಹೇಯವಾದವು; ಆದರೆ ಇವನ್ನು ಜಯಿಸುವುದು ಸಾಧ್ಯ. ಹಕ್ಕಿಮರದಿಂದ ಮರಕ್ಕೆ ಹಾರುವಂತೆ ಮರಣವನ್ನು ಕಾಣಬೇಕೆಂದು ಸುಮಂಗಲ ವಿಲಾಸಿನಿ ಹೇಳುತ್ತದೆ. ಆಯುಷ್ಯ ಮುಗಿದ ಅನಂತರ ಜೀವಿತಿಂದ್ರಿಯ (ಪ್ರಾಣ) ಕೊನೆಗಾಣುವುದೇ ಮರಣ. ಆದರೆ ಕೊನೆಗಾಲದಲ್ಲಿ ಒದಗಿದ ಭಾವನೆ ಮುಂದಿನಗತಿಯನ್ನು ನಿರ್ದೇಶಿಸುವುದೆಂದು ನಂಬಿಕೆ ಇದ್ದುದರಿಂದ ಮರಣದ ಸಮಯದಲ್ಲಿ ಸದ್ಭಾವನೆಗಳನ್ನು ಮೂಡಿಸುವ ಅಗತ್ಯ ಬೌದ್ಧಭಿಕ್ಷುಗಳಿಗೆ ಇದ್ದಿತು. ಸ್ಕಂಧಗಳ ಭೇದ ಮರಣವಾದುದರಿಂದ. ಸ್ಕಂಧಭಗ್ನವಾಗುವಾಗ ಒದಗುವ ಚ್ಯುತಿಚಿತ್ತ ಶುಭವಾದರೆ ಮತ್ತೆ ಸ್ಕಂಧಗಳ ಸಂಯೋಗ ಈ ಆಲಂಬನದ ಮೇಲೆ ಒದಗುತ್ತದೆ.			(ನೋಡಿ- ಅಭಿಧಮ್ಮ)

	ಕ್ರೈಸ್ತರ ದೃಷ್ಟಿಯಲ್ಲಿ ಮರಣ ವಿಶ್ರಾಂತಿ; ಸಮಾಧಿ ನೆಲೆ. ಶ್ರದ್ಧೆಯಿಂದ ಸತ್ತವರು ನೆಲೆಯಲ್ಲಿ ಆರಾಮದಿಂದ ಇರುತ್ತಾರೆ. ಧರ್ಮಬಾಹಿರರಾಗಿ ದುಷ್ಟರಾದವರು ನರಕಕ್ಕೆ ಸಲ್ಲುತ್ತಾರೆ. ಆದ ಕಾರಣ ಸಾಯುವ ಮುನ್ನ ವ್ಯಕ್ತಿ ತನ್ನ ಅಪರಾಧಗಳನ್ನೆಲ್ಲ ಒಪ್ಪಿಕೊಂಡು ಕನಿಕರಪಟ್ಟರೆ ಸದ್ಗತಿ ದೊರೆಯುತ್ತದೆ. ಇದು ಕ್ರೈಸ್ತರ ಮರಣ ಸಮಯದಲ್ಲಿ ತುಂಬು ಅಗತ್ಯವಾದ ಕ್ರಿಯೆ (ತಪ್ಪೊಪ್ಪಿಗೆ) (ನೋಡಿ- ಕ್ರೈಸ್ತ-ಧರ್ಮ). ಮರಣವೆಂದರೆ ದೇಹದಲ್ಲಿ ಮನೆ ಮಾಡಿರುವ ಪವಿತ್ರ ದೈವ ಊಧ್ರ್ವಗಾಮಿಯಾಗಿ ಹೊರಡುವ ಸಂದರ್ಭ. ಮರಣವನ್ನು ಗೀವಿಂಗ್ ಆಫ್‍ದಿ ಗೋಸ್ಟ್ ಎಂದು ಅವರು ಬಣ್ಣಿಸುತ್ತಾರೆ. ಅಮೃತತ್ವದ ಕಲ್ಪನೆ ಅವರಲ್ಲಿ ಇರುವುದರಿಂದ ಸಾವು ಅತ್ಯಂತಿಕವಾದ ಸ್ಥಿತಿ ಎಂದು ಅವರು ಒಪ್ಪುವುದಿಲ್ಲ. ಕ್ರೈಸ್ತರು ಪುನರ್ಜನ್ಮವನ್ನು ನಂಬುವುದಿಲ್ಲವಾದರೂ ಸಾವನ್ನು ಮೀರಿದ ಸ್ಥಿತಿಯೊಂದು ಅವರ ಪಾಲಿಗೆ ಉಂಟು. ಯೆಹೂದಿಯರು ಕೂಡ ಸಾವನ್ನು ವ್ಯಕ್ತಿತ್ವದ ನಾಶವೆಂದು ಪರಿಗಣಿಸುವುದಿಲ್ಲ. ಮರಣಾನಂತರ ವ್ಯಕ್ತಿಯ ಸೂಕ್ಷ್ಮ ಶರೀರ ಪಾತಾಳದಲ್ಲಿ ಶೀಯೋಲ್ ಎಂಬ ಪ್ರೇತಲೋಕದಲ್ಲಿ ಮುಂದುವರಿಯುತ್ತದೆ. ಪಿತೃಪೂಜೆಯ ಪದ್ಧತಿಯೂ ಇವರಲ್ಲಿ ಉಂಟು. 

	ಮರಣದ ವ್ಯಾಜದಿಂದ ಪಿತೃಪೂಜೆಯ ಪ್ರಸಕ್ತಿ ವಿಶೇಷವಾಗಿ ಬೆಳೆದುಬಂದುದು ಚೀನೀ ಧರ್ಮದಲ್ಲಿ. ಚೀನೀಯರು ಎರಡು ಬಗೆಯ ಮರಣವನ್ನು ಹೇಳುತ್ತಾರೆ. ಒಂದು ಸ್ವಾಭಾವಿಕವಾದ ಮುಪ್ಪಿನ ಮರಣ. ರೇಷ್ಮೆಗೂಡಿನ ಅಂತ್ಯದಂತೆ ಇರುವ ಈ ಮರಣ ಅನಿವಾರ್ಯವಾದುದು. ಆದರೆ ಇನ್ನೊಂದು ಬಗೆಯ ಅಕಾಲ ಮರಣ ಅಸ್ವಾಭಾವಿಕವಾದುದು; ಪಾಪದಿಂದ ಒದಗಿದ ವಿಯೋಗ ಇದು. ಮರಣೋನ್ಮುಖನಾದವನ ಮಕ್ಕಳು. ಬಂಧುಬಳಗ ಸುತ್ತ ನೆರೆದು ಅತ್ತು ಗೋಳಿಟ್ಟರೆ ಅವನಿಗೆ ಸ್ವರ್ಗದ ಬಾಗಿಲು ತೆರೆಯುವುದೆಂದು ಅವರ ಕಲ್ಪನೆ; ಅದೂ ಹೆಣ್ಣು ಮಕ್ಕಳ ಅಳು ಪ್ರಭಾವಶಾಲಿಯಾದುದು. ಈ ಕಾರಣದಿಂದಲೇ ಚೀನೀ ಗೃಹಸ್ಥ ಜೀವನದಲ್ಲಿ ಹೆಣ್ಣು ಮಕ್ಕಳು ಬೇಕೆಂಬ ಬಯಕೆ ಇರುವುದು. ಜಪಾನೀಯರ ಸಾವಿನ ಕಲ್ಪನೆಯಲ್ಲಿ ಬೌದ್ಧಮತದ ಪ್ರಭಾವ ತುಂಬಕಾಣುತ್ತದೆ. ಅವರ ಮರಣೋತ್ತರ ಕ್ರಿಯೆಗಳಲ್ಲಿ ಭಿಕ್ಷುಗಳ ಪಾತ್ರವೇ ಹೆಚ್ಚು. 

	ಇಸ್ಲಾಮ್ ಧರ್ಮದಲ್ಲಿ ಪ್ರತಿಯೊಂದು ಜೀವವೂ ಸಾವಿನ ರುಚಿಯನ್ನು ಕಾಣಲೇಬೇಕು. ಯಾವ ಮನುಷ್ಯ ಯಾವ ಗಳಿಗೆಯಲ್ಲಿ ಸಾಯಬೇಕು ಎಂಬುದನ್ನು ದೇವರು ಮೊದಲೇ ಕರಾರುವಾಕ್ಕಾಗಿ ನಿರ್ಧರಿಸಿರುತ್ತಾನೆ. ಆದಕಾರಣ ಯಾರೊಬ್ಬರೂ ತಾವಾಗಿ ಸಾಯಬೇಕೆಂದು ಬಯಸುವುದು ತಪ್ಪು. ಮರಣದ ಸಮಯದಲ್ಲಿ ಕಲ್ಮಾ (ಅಲ್ಲಾನನ್ನು ಬಿಟ್ಟು ಬೇರೊಬ್ಬ ದೇವರಿಲ್ಲ ಎಂಬ ಪ್ರಣಿಧಿ) ನೆನಪಿನಲ್ಲಿದ್ದರೆ ಸತ್ತ ಅನಂತರ ಸ್ವರ್ಗ ದೊರೆಯುತ್ತದೆ. ಈ ಕಾರಣದಿಂದ ಪ್ರಾಣೋತ್ಕ್ರಮಣಕಾಲದಲ್ಲಿ ಮೌಲ್ವಿ ಒಂದು ಕಲ್ಮಾವನ್ನು ಪಠಿಸುತ್ತಾನೆ. ಮಹಮ್ಮದ್ ಪ್ರವಾದಿಯ ದೇಶದಲ್ಲಿ ಶ್ರದ್ಧೆಯಿಲ್ಲದವ ಸಾಯುವಾಗ ಕರಿಮೋರೆಯ ದೇವದೂತರು ಬಂದು ಅವನ ಆತ್ಮವನ್ನು ಕೊಂಡುಹೋಗಿ ನರಕದಲ್ಲಿ ಒಗೆಯುತ್ತಾರೆ. 

	ಹೀಗೆ ಪ್ರಪಂಚದ ವಿವಿಧ ದೇಶಗಳಲ್ಲಿಯೂ ಜನಾಂಗಗಳಲ್ಲಿಯೂ ಮರಣದ ವಿಚಾರವಾಗಿ ಪ್ರಚಲಿತವಾಗಿರುವ ಕಲ್ಪನೆಗಳಲ್ಲಿಯೂ ಮರಣೋತ್ತರ ಕ್ರಿಯೆಗಳಲ್ಲಿಯೂ ಸಾದೃಶ್ಯವಿರುವುದು ಗಮನಾರ್ಹ. ಮಾನವನ ಸ್ವಭಾವ ಸಿದ್ಧವಾದ ಭೀತಿ, ನಿರೀಕ್ಷೆ, ಆಶೋತ್ತರಗಳನ್ನು ಮರಣದ ಕಲ್ಪನೆ ಪ್ರತಿಬಿಂಬಿಸುತ್ತದೆ.
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ